ದೇವಕಿ
	ಭಾಗವತದಲ್ಲಿ ಉಕ್ತವಾಗಿರುವಂತೆ ಶ್ರೀಕೃಷ್ಣನ ತಾಯಿ, ದೇವಕನ ಮಗಳು, ವಸುದೇವನ ಏಳುಮಂದಿ ಪತ್ನಿಯರಲ್ಲಿ ಒಬ್ಬಳು. ಈಕೆ ಸ್ವಾಯಂಭುವ ಮನ್ವಂತರದಲ್ಲಿ ಪೃಶಿಯೆಂಬ ಹೆಸರಿನ ಮಹಾ ಪತಿವ್ರತೆ. ಸುತಪನೆಂಬ ಬ್ರಹ್ಮನ ಹೆಂಡತಿಯಾಗಿದ್ದಳು. ವಿಷ್ಣುವನ್ನು ತಪಸ್ಸಿನಿಂದ ಮೆಚ್ಚಿಸಿ ತನ್ನ ಮಗನಾಗಿ ಜನಿಸಬೇಕೆಂದು ವರ ಬೇಡಿ ಶ್ರೀಕೃಷ್ಣನನ್ನು ಹೆತ್ತಳು. ಅನಂತರ ಈ ದಂಪತಿಗಳೇ ಅದಿತಿ ಕಶ್ಯಪರಾದರು. ಮೂರು ಜನ್ಮದಲ್ಲೂ ವಿಷ್ಣುವನ್ನೇ ಮಗನನ್ನಾಗಿ ಪಡೆದರು. 

	ಯಾದವರಲ್ಲಿ ಭೋಜ, ವೃಷ್ಣಿ ಮೊದಲಾದ ಗುಂಪುಗಳುಂಟು. ಕಂಸ ಅದರಲ್ಲಿ ಭೋಜ ಕುಲದವ. ಆತ ತನ್ನ ತಂಗಿಯಾದ ದೇವಕಿಯನ್ನು ವೃಷ್ಣಿ ಕುಲದ ವಸುದೇವನಿಗೆ ಕೊಟ್ಟು ಮದುವೆ ಮಾಡಿದ. ಆ ಸಂದರ್ಭದಲ್ಲಿ ಉಂಟಾದ ಆಶರೀರವಾಣಿಯನ್ನು ಕೇಳಿ ಕಂಸ ತಂಗಿಯನ್ನು ಕೊಲ್ಲಲು ಉದ್ಯುಕ್ತನಾದ. ಆಗ ವಸುದೇವ ಆಕೆಗೆ ಹುಟ್ಟಿದ ಮಕ್ಕಳನ್ನೆಲ್ಲ ಕಂಸನಿಗೆ ತಂದೊಪ್ಪಿಸುತ್ತೇನೆಂದ ಹೇಳಿ ದೇವಕಿಯ ಹತ್ಯೆಯನ್ನು ತಪ್ಪಿಸಿದ. ಕಂಸನಾದರೋ ಆ ದಂಪತಿಗಳನ್ನು ಸೆರೆಯಲ್ಲಿಟ್ಟ. ದೇವಕಿ ವರ್ಷಕ್ಕೊಂದರಂತೆ ಆರು ಮಕ್ಕಳನ್ನು ಹೆತ್ತು ಕಂಸನಿಗೆ ಬಲಿಕೊಟ್ಟಳು. ಏಳನೆಯ ಗರ್ಭದಲ್ಲಿ ನಾಗೇಂದ್ರ ಬಂದಾಗ ವಿಷ್ಣುವಿನ ಆಜ್ಞೆಯಂತೆ ಆ ಗರ್ಭವನ್ನು ವಸುದೇವನ ಮೊದಲ ಹೆಂಡತಿ ರೋಹಿಣಿಯಲ್ಲಿಡಲು ಅದು ಬಲರಾಮನಾಗಿ ಉಳಿಯಿತು. ಎಂಟನೆಯ ಗರ್ಭವೇ ಶ್ರೀಕೃಷ್ಣ. ಭೂಭಾರವನ್ನು ಇಳುಹಲು ಹುಟ್ಟಿದ ಮಹಾವಿಷ್ಣು. 

	ಶ್ರೀಕೃಷ್ಣ ನಿರ್ಯಾಣಾನಂತರ ವಸುದೇವನೊಂದಿಗೆ ದೇವಕಿ ಸಹಗಮನಮಾಡಿದಳು. ಆದಿಪರ್ವತದಲ್ಲಿ ಬರುವ ದೇವಕಿ ಶೈಬ್ಯರಾಜನ ಮಗಳು; ಯುಧಿಷ್ಠರನ ಹೆಂಡತಿ. ಈಕೆಯ ಮಕ್ಕಳು ಯೌಧೇಯರು. ದೇವಕ ಈ ಮಕ್ಕಳಲ್ಲಿ ಒಬ್ಬ.
(ಎಚ್.ಬಿ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ